ಬಾಲಕಾಂಡ - ಸರ್ಗ ೨

 
ನಾರದಸ್ಯ ತು ತದ್ವಾಕ್ಯಂ ಶ್ರುತ್ವಾ ವಾಕ್ಯ ವಿಶಾರದಃ  | 
ಪೂಜಯಾಮಾಸ ಧರ್ಮಾತ್ಮಾ ಸಹಶಿಷ್ಯೋ ಮಹಾಮುನಿಃ ||2.1||
ಇನ್ನಷ್ಟು ಓದಿ......
ಅನ್ವಯ: ನಾರದಸ್ಯ ತು ತತ್ ವಾಕ್ಯಂ ಶ್ರುತ್ವಾ  ವಾಕ್ಯವಿಶಾರದಃ ಮಹಾಮುನಿಃ ಧರ್ಮಾತ್ಮಾ ಸಹಶಿಷ್ಯಃ ಪೂಜಯಾಮಾಸ.
ಶಬ್ದಾರ್ಥ: ನಾರದಸ್ಯ=ನಾರದನ; ತು=ಆದರೆ; ತತ್ = ಆ; ವಾಕ್ಯಂ=ವಾಕ್ಯವನ್ನು; ಶ್ರುತ್ವಾ=ಕೇಳಿ;  ವಾಕ್ಯವಿಶಾರದಃ=ವಾಕ್ಯನಿಪುಣನು; ಮಹಾಮುನಿಃ=ಮಹಾಮುನಿಯು; ಧರ್ಮಾತ್ಮಾ=ಧರ್ಮಾತ್ಮನು; ಸಹಶಿಷ್ಯಃ=ಶಿಷ್ಯರ ಜೊತೆ; ಪೂಜಯಾಮಾಸ=ಪೂಜೆ ಮಾಡಿದನು
ಅನುವಾದ:  ನಾರದನ ಆ ಮಾತುಗಳನ್ನು ಕೇಳಿದ ವಾಕ್ಯವಿಶಾರದ ಹಾಗೂ ಧರ್ಮಾತ್ಮನಾದ ಮಹಾಮುನಿ ವಾಲ್ಮೀಕಿಯು ತನ್ನ ಶಿಷ್ಯರ ಜೊತೆಗೂಡಿ ವಾಲ್ಮೀಕಿಯನ್ನು ಪೂಜಿಸಿದನು.
♦
♦
ಯಥಾವತ್ಪೂಜಿತಸ್ತೇನ ದೇವರ್ಷಿರ್ನಾರದಸ್ತಥಾ|
ಅಪೃಚ್ಛ್ಯೈವಾಭ್ಯನುಜ್ಞಾತಃ ಸ ಜಗಾಮ ವಿಯಾಸಮ್||2.2||
ಇನ್ನಷ್ಟು ಓದಿ......
ಅನ್ವಯ:ತೇನ ಯಥಾವತ್ ಪೂಜಿತಃ ದೇವರ್ಷಿಃ ನಾರದಃ ತದಾ ಅಪೃಚ್ಛ ಏವ ಅಭ್ಯನುಜ್ಞಾತಃ ಸಃ ವಿಯಾಸಮ್ ಜಗಾಮ.
ಶಬ್ದಾರ್ಥ: ತೇನ=ಅವನಿಂದ; ಯಥಾವತ್=ಯಥಾವತ್; ಪೂಜಿತಃ=ಪೂಜಿಸಲ್ಪಟ್ಟು; ದೇವರ್ಷಿಃ=ದೇವರ್ಷಿ; ನಾರದಃ =ನಾರದನು; ತದಾ=ಆಗ; ಅಪೃಚ್ಛಏವ=ಕೇಳಿಯೇ; ಅಭ್ಯನುಜ್ಞಾತಃ=ಅಪ್ಪಣೆ ಪಡೆದು; ಸಃ=ಅವನು; ವಿಯಾಸಮ್=ಸ್ವರ್ಗಕ್ಕೆ; ಜಗಾಮ=ಹೋದನು
ಅನುವಾದ: ಆಗ ದೇವರ್ಷಿ ನಾರದನು ವಾಲ್ಮೀಕಿಯಿಂದ ಯಥಾವತ್ತಾಗಿ ಪೂಜಿಸಲ್ಪಟ್ಟು, ನಂತರ ಅವನ ಅಪ್ಪಣೆಯನ್ನು ಪಡೆದು ಸ್ವರ್ಗಕ್ಕೆ ಮರಳಿ ಹೋದನು.
♦
ಸ ಮುಹೂರ್ತಂ ಗತೇ ತಸ್ಮಿನ್ದೇವಲೋಕಂ ಮುನಿಸ್ತದಾ|
ಜಗಾಮ ತಮಸಾತೀರಂ ಜಾಹ್ನವ್ಯಸ್ತ್ವ ವಿದೂರತಃ ||2.3||
ಇನ್ನಷ್ಟು ಓದಿ......
ಅನ್ವಯ: ತಸ್ಮಿನ್ ದೇವಲೋಕಂ ಗತೇ ಮುಹೂರ್ತಂ ತದಾ ಸಃ ಮುನಿಃ ಜಾಹ್ನಿವ್ಯಾತ್ ಅವಿ ದೂರಾತ್ ತಮಾಸಾ ತೀರಂ ಜಗಾಮ.
ಶಬ್ದಾರ್ಥ: ತಸ್ಮಿನ್=ಆ; ಮುಹೂರ್ತಂ=ಮುಹೂರ್ತದಲ್ಲಿ; ದೇವಲೋಕಂ=ದೇವಲೋಕಕ್ಕೆ; ಗತೇ=ಹೋದ; ತದಾ=ಆಗ; ಸಃ=ಅವನು; ಮುನಿಃ=ಋಷಿಯು; ಜಾಹ್ನಿವ್ಯಾತ್=ಜಾಹ್ನಿವಿ ನದಿಯ ತೀರದಿಂದ; ಅವಿ=ಹತ್ತಿರ; ದೂರಾತ್=ದೂರದಲ್ಲಿ; ತಮಾಸಾ ತೀರಂ=ತಮಸಾ ನದಿಯ ತೀರಕ್ಕೆ; ಜಗಾಮ=ಹೋದನು
ಅನುವಾದ: ನಾರದನು ದೇವಲೋಕಕ್ಕೆ ಹೋದಮೇಲೆ ವಾಲ್ಮೀಕಿಯು ಜಾಹ್ನಿವಿ ನದಿಯ ಹತ್ತಿರದಲ್ಲಿರುವ ತಮಸಾ ನದಿ ತೀರಕ್ಕೆ ಹೋದನು.
♦
ಸ ತು ತೀರಂ ಸಮಾಸಾದ್ಯ ತಮಸಾಯಾ ಮುನಿಸ್ತದಾ|
ಶಿಷ್ಯಮಾಹ ಸ್ಥಿತಂ ಪಾರ್ಶ್ವೇ ದೃಷ್ಟ್ವಾ ತೀರ್ಥಮಕರ್ದಮಮ್||2.4||
ಇನ್ನಷ್ಟು ಓದಿ......
ಶಬ್ದಾರ್ಥ: ಸಃ=ಅವನು; ತು=ಆದರೆ; ತೀರಂ=ತೀರವನ್ನು; ಸಮಾಸಾದ್ಯ=ತಲುಪಿ; ತಮಸಾಯಾ=ತಮಸಾ ನದಿಯ; ಮುನಿಃ=ಮುನಿಯು; ತದಾ=ಆಗ; ಶಿಷ್ಯಮ್=ಶಿಷ್ಯನಿಗೆ; ಆಹ=ಹೇಳಿದನು; ಸ್ಥಿತಂ=ನಿಂತಿದ್ದ; ಪಾರ್ಶ್ವೇ=ಪಕ್ಕದಲ್ಲಿ; ದೃಷ್ಟ್ವಾ=ನೋಡಿ; ತೀರ್ಥಮ್=ನೀರನ್ನು; ಅಕರ್ದಮಮ್=ತಿಳಿಯಾಗಿರುವ
ಅನುವಾದ:ತಮಸಾ ನದಿಯ ತೀರವನ್ನು ತಲುಪಿದ ಮುನಿಯು(ವಾಲ್ಮೀಕಿಯು) ಒಂದು ಕಡೆ ತಿಳಿಯಾಗಿರುವ ನೀರನ್ನು ನೋಡಿ ಪಕ್ಕದಲ್ಲಿ ನಿಂತ ಶಿಷ್ಯನಿಗೆ ಹೇಳಿದನು.
♦
ಅಕರ್ದಮಮ್ ಇದಂ ತೀರ್ಥಂ ಭರದ್ವಾಜ ನಿಶಾಮಯ|
ರಮಣೀಯ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ||2.5||
ಇನ್ನಷ್ಟು ಓದಿ......
ಶಬ್ದಾರ್ಥ: ಅಕರ್ದಮಮ್=ಕೆಸರಿಲ್ಲದ; ಇದಂ=ಇದು; ತೀರ್ಥಂ=ನೀರು; ಭರದ್ವಾಜ=ಭರದ್ವಾಜನೇ; ನಿಶಾಮಯ=ಗಮನಿಸು;ರಮಣೀಯ=ಸುಂದರ; ಪ್ರಸನ್ನ ಅಂಬು=ಸುಂದರ ನೀರು; ಸನ್ಮನುಷ್ಯಮನಃ=ಸಜ್ಜನರ ಮನಸ್ಸಿನ; ಯಥಾ=ಅದರಂತೆ
ಅನುವಾದ: (ವಾಲ್ಮೀಕಿ ಹೇಳಿದನು)"ಭರದ್ವಾಜನೇ, ಈ ತಿಳಿಯಾದ ಪ್ರಸನ್ನ ರಮಣೀಯ ನೀರನ್ನು ನೋಡು. ಇದು ಸಜ್ಜನರ ಮನಸ್ಸಿನಂತೆ ನಿಷ್ಕಲ್ಮಷವಾಗಿದೆ.""
♦
ನ್ಯಸ್ಯತಾಂ ಕಲಶಸ್ತಾತ ದೀಯತಾಂ ವಲ್ಕಲಂ ಮಮ|
ಇದಮೇವಾವಗಾಹಿಷ್ಯೇ ತಮಸಾತೀರ್ಥಮುತ್ತಮಮ್ ||2.6||
ಇನ್ನಷ್ಟು ಓದಿ......
ಶಬ್ದಾರ್ಥ: ನ್ಯಸ್ಯತಾಂ=ಇಡು, ಇಡಲ್ಪಡಲಿ; ಕಲಶಃ=ಕಲಶವನ್ನು; ತಾತ=ತಾತ,ಮಗು; ದೀಯತಾಂ=ಕೊಡು; ವಲ್ಕಲಂ=ನಾರುಮಡಿಯನ್ನು; ಮಮ=ನನ್ನ;ಇದಮ್ ಏವ= ಇದೇ, ಇಲ್ಲೇ; ಅವಗಾಹಿಷ್ಯೇ=ಇಳಿಯುತ್ತೇನೆ; ತಮಸಾತೀರ್ಥಮ್=ತಮಸಾ ನೀರನ್ನು; ಉತ್ತಮಮ್=ಉತ್ತಮವಾದದ್ದನ್ನು
ಅನುವಾದ: "ಪ್ರಿಯನೇ, ನನ್ನ ಕಲಶವನ್ನು ಇಲ್ಲೇ ಇಡು, ನನ್ನ ನಾರು ಮಡಿಯನ್ನು ತಂದುಕೊಡು. ನಾನು ಇಲ್ಲೇ ಉತ್ತಮವಾದ ತಮಸಾ ನದಿಗೆ ಸ್ನಾನಕ್ಕೆ ಇಳಿಯುತ್ತೇನೆ."
♦
ಏವಮುಕ್ತೋ ಭರದ್ವಾಜೋ ವಾಲ್ಮೀಕೇನ ಮಹಾತ್ಮನಾ|
ಪ್ರಾಯಚ್ಛತ ಮುನೇಸ್ತಸ್ಯ ವಲ್ಕಲಂ ನಿಯತೋ ಗುರೋಃ ||2.7||
ಇನ್ನಷ್ಟು ಓದಿ......
ಶಬ್ದಾರ್ಥ: ಏವಮ್=ಹೀಗೆ; ಉಕ್ತಃ=ಹೇಳಿದ; ಭರದ್ವಾಜಃ=ಭರದ್ವಾಜನು; ವಾಲ್ಮೀಕೇನ=ವಾಲ್ಮೀಕಿಯಿಂದ; ಮಹಾತ್ಮನಾ=ಮಹಾತ್ಮನಿಂದ;ಪ್ರಾಯಚ್ಛತ=ಕೊಟ್ಟನು; ಮುನೇಃ=ಮುನಿಯ; ತಸ್ಯ=ಅವನ; ವಲ್ಕಲಂ=ನಾರು ಮಡಿಯನ್ನು; ನಿಯತಃ=ವಿಧೇಯನು; ಗುರೋಃ=ಗುರುವಿಗೆ
ಅನುವಾದ: ಮಹಾತ್ಮನಾದ ವಾಲ್ಮೀಕಿಯಿಂದ ಹೀಗೆ ಹೇಳಲ್ಪಟ್ಟ ವಿಧೇಯನಾದ ಭರದ್ವಾಜನು ಅವನ ನಾರು ಮಡಿಯನ್ನು ಅವನಿಗೆ ತಂದುಕೊಟ್ಟನು.
♦
ಸ ಶಿಷ್ಯಹಸ್ತಾದಾದಾಯ ವಲ್ಕಲಂ ನಿಯತೇಂದ್ರಿಯಃ|
ವಿಚಚಾರ ಹ ಪಶ್ಯಂಸ್ತತ್ಸರ್ವತೋ ವಿಪುಲಂ ವನಮ್ ||2.೮||
ಇನ್ನಷ್ಟು ಓದಿ......
ಶಬ್ದಾರ್ಥ: ಸಃ=ಅವನು; ಶಿಷ್ಯಹಸ್ತಾತ್=ಶಿಷ್ಯನ ಕೈಯಿಂದ; ಆದಾಯ=ತೆಗೆದುಕೊಂಡ; ವಲ್ಕಲಂ=ನಾರುಮಡಿಯನ್ನು; ನಿಯತೇಂದ್ರಿಯಃ=ಜಿತೇಂದ್ರಿಯನು;ವಿಚಚಾರ=ನಡೆದನು; ಹ=ನಿಜಕ್ಕೂ; ಪಶ್ಯನ್=ನೋಡಿ;ತತ್=ಅದು; ಸರ್ವತಃ=ಎಲ್ಲೆಡೆಗೆ; ವಿಪುಲಂ ವನಮ್=ವಿಪುಲವಾದ ಕಾಡನ್ನು
ಅನುವಾದ: ಜಿತೇಂದ್ರಿಯನಾದ ವಾಲ್ಮೀಕಿಯು ಶಿಷ್ಯನ ಕೈಯಿಂದ ವಲ್ಕಲವನ್ನು- ನಾರುಮಡಿಯನ್ನು ತೆಗೆದುಕೊಂಡು ವಿಪುಲವಾದ ಕಾಡಲ್ಲಿ ಎಲ್ಲೆಡೆಗೆ ನೋಡುತ್ತ ನಡೆದನು.
♦

ತಸ್ಯಾಭ್ಯಾಶೇ ತು ಮಿಥುನಂ ಚರಂತಮನಪಾಯಿನಮ್|
ದದರ್ಶ ಭಗವಾಂಸ್ತತ್ರ ಕ್ರೌಂಚಯೋಶ್ಚಾರುನಿಃಸ್ವನಮ್||2.2||
ಇನ್ನಷ್ಟು ಓದಿ......
ಶಬ್ದಾರ್ಥ: ತಸ್ಯ=ಅದರ; ಅಭ್ಯಾಶೇ=ಹತ್ತಿರ; ತು=ಆದರೆ; ಮಿಥುನಂ=ಜೊತೆಯನ್ನು, ಜೋಡಿಯನ್ನು; ಚರಂತಮ್=ಚಲಿಸುತ್ತಿರುವ; ಅನಪಾಯಿನಮ್=ಬೇರ್ಪಡದ; ದದರ್ಶ=ನೋಡಿದನು; ಭಗವಾನ್=ಭಗವಾನನು, ವಾಲ್ಮೀಕಿಯು; ತತ್ರ=ಅಲ್ಲಿ; ಕ್ರೌಂಚಯೋಃ=ಎರಡು ಕ್ರೌಂಚಪಕ್ಷಿಗಳನ್ನು; ಚಾರುನಿಃಸ್ವನಮ್=ಸುಂದರವಾಗಿ ಹಾಡುತ್ತಿರುವ
ಅನುವಾದ: ಅಲ್ಲಿ ವಾಲ್ಮೀಕಿಯು ನದಿಯ ತೀರದ ಹತ್ತಿರ ಸುಂದರವಾಗಿ ಹಾಡುತ್ತಿರುವ, ಅಲ್ಲೇ ಹಾರುತ್ತಿರುವ ಕ್ರೌಂಚಪಕ್ಷಿಗಳ ಜೊತೆಯನ್ನು ನೋಡಿದನು.
♦
ತಸ್ಮಾತ್ತು ಮಿಥುನಾದೇಕಂ ಪುಮಾಂಸಂ ಪಾಪನಿಶ್ಚಯಃ|
ಜಘಾನ ವೈರನಿಲಯೋ ನಿಷಾದಸ್ತಸ್ಯ ಪಶ್ಯತಃ||2.10||
ಇನ್ನಷ್ಟು ಓದಿ......
ಶಬ್ದಾರ್ಥ: ತಸ್ಮಾತ್=ಅದರಲ್ಲಿ; ತು=ಆದರೆ; ಮಿಥುನಾತ್=ಜೋಡಿಯಲ್ಲಿ; ಏಕಂ=ಒಂದನ್ನು; ಪುಮಾಂಸಂ=ಗಂಡು ಹಕ್ಕಿಯನ್ನು; ಪಾಪನಿಶ್ಚಯಃ=ಪಾಪಿಯಾದ; ಜಘಾನ=ಕೊಂದನು; ವೈರನಿಲಯಃ=ವೈರಭಾವನೆಯಿಂದ,ಕ್ರೌರ್ಯದಿಂದ; ನಿಷಾದಃ=ಬೇಡನು; ತಸ್ಯ=ಅವನ; ಪಶ್ಯತಃ=ನೋಡುತ್ತಿದ್ದಂತೆ
ಅನುವಾದ: ಅವನು ನೋಡುತ್ತಿದ್ದಂತೆ ಆ ಜೋಡಿಯಲ್ಲಿ ಗಂಡು ಹಕ್ಕಿಯನ್ನು ಒಬ್ಬ ಕ್ರೂರಿ ಬೇಡನು ವೈರಭಾವದಿಂದ ಕೊಂದನು.
♦
ತಂ ಶೋಣಿತಪರೀತಾಂಗಂ ವೇಷ್ಟಮಾನಂ ಮಹೀತಲೇ|
ಭಾರ್ಯಾ ತು ನಿಹತಂ ದೃಷ್ಟ್ವಾ ರುರಾವ ಕರುಣಾಂ ಗಿರಮ್ ||2.11||
ವಿಯುಕ್ತಾ ಪತಿನಾ ತೇನ ದ್ವಿಜೇನ ಸಹಚಾರಿಣಾ|
ತಾಮ್ರಶೀರ್ಷೇಣ ಮತ್ತೇನ ಪತ್ರಿಣಾ ಸಹಿತೇನ ವೈ||2.12||
ಇನ್ನಷ್ಟು ಓದಿ......
ಶಬ್ದಾರ್ಥ: ತಂ=ಅದನ್ನು; ಶೋಣಿತಪರೀತಾಂಗಂ=ರಕ್ತಸಿಕ್ತವಾದ ಅಂಗಗಳ; ವೇಷ್ಟಮಾನಂ=ಒದ್ದಾಡುತ್ತಿರುವ; ಮಹೀತಲೇ=ನೆಲದ ಮೇಲೆ;ಭಾರ್ಯಾ=ಪತ್ನಿ; ತು=ಆದರೋ; ನಿಹತಂ=ಸತ್ತ; ದೃಷ್ಟ್ವಾ=ನೋಡಿ; ರುರಾವ=ಅತ್ತಿತು; ಕರುಣಾಂ=ಕರುಣಾಜನಕವಾದ; ಗಿರಮ್=ಕೂಗು,ಆಕ್ರಂದನ; ವಿಯುಕ್ತಾ=ವಿಯೋಗಗೊಂಡ,ಬೇರ್ಪಟ್ಟ; ಪತಿನಾ=ಪತಿಯಿಂದ; ತೇನ=ಅದರಿಂದ; ದ್ವಿಜೇನ=ಹಕ್ಕಿಯಿಂದ; ಸಹಚಾರಿಣಾ=ಸಹಚಾರಿಯಿಂದ; ತಾಮ್ರಶೀರ್ಷೇಣ=ಕೆಂಪು ಜುಟ್ಟನ ಹಕ್ಕಿಯಿಂದ; ಮತ್ತೇನ=ಮತ್ತಿನಲ್ಲಿರುವದರಿಂದ; ಪತ್ರಿಣಾ=ಸುಂದರ ರಕ್ಕೆಯುಳ್ಳದ್ದರಿಂದ; ಸಹಿತೇನ=ಜೊತೆಯಲ್ಲಿರವ; ವೈ=ನಿಜಕ್ಕೂ
ಅನುವಾದ: ಆಗ ಹೆಣ್ಣು ಹಕ್ಕಿಯು ರಕ್ತಸಿಕ್ತವಾದ ನೆಲದ ಮೇಲೆ ಬಿದ್ದು ಒದ್ದಾಡಿ ಸತ್ತ ತನ್ನ ಜೊತೆಗಾರನನ್ನು ನೋಡಿ, ತನ್ನ ಪತಿಯಿಂದ ಬೇರ್ಪಟ್ಟ ದುಃಖದಿಂದ ಕರುಣಾಜನಕವಾಗಿ ಕೂಗತೊಡಗಿತು.
♦
ತಥಾ ತು ತಂ ದ್ವಿಜಂ ದೃಷ್ಟ್ವಾ ನಿಷಾದೇನ ನಿಪಾತಿತಮ್ |
ಋಷೇರ್ಧರ್ಮಾತ್ಮನಸ್ತಸ್ಯ ಕಾರುಣ್ಯಂ ಸಮಪದ್ಯತ||2.13||

ಇನ್ನಷ್ಟು ಓದಿ......
ಶಬ್ದಾರ್ಥ:ತಥಾ=ಹಾಗೆ; ತು=ಆದರೆ; ತಂ ದ್ವಿಜಂ=ಆ ಹಕ್ಕಿಯನ್ನು; ದೃಷ್ಟ್ವಾ=ನೋಡಿ; ನಿಷಾದೇನ=ಬೇಡನಿಂದ; ನಿಪಾತಿತಮ್=ಕೊಲ್ಲಲ್ಪಟ್ಟ; ಋಷೇಃ=ಋಷಿಗೆ; ಧರ್ಮಾತ್ಮನಃ=ಧರ್ಮಾತ್ಮನ; ತಸ್ಯ=ಅವನ; ಕಾರುಣ್ಯಂ=ಕರುಣೆಯು; ಸಮಪದ್ಯತ=ಉಂಟಾಯಿತು

ಅನುವಾದ:ಆಗ ಬೇಡನಿಂದ ಕೊಲ್ಲಲ್ಪಟ್ಟ ಪಕ್ಷಿಯನ್ನು ನೋಡಿ ಧರ್ಮಾತ್ಮನಾದ ವಾಲ್ಮೀಕಿಗೆ ಕರುಣೆ ಉಂಟಾಯಿತು.
♦
ತತಃ ಕರುಣವೇದಿತ್ವಾದಧರ್ಮೋऽಯಮಿತಿ ದ್ವಿಜಃ|
ನಿಶಾಮ್ಯ ರುದತೀಂ ಕ್ರೌಂಚೀಮಿದಂ ವಚನಮಬ್ರವೀತ್||2.14||
ಇನ್ನಷ್ಟು ಓದಿ......
ಶಬ್ದಾರ್ಥ:ತತಃ=ಆಗ; ಕರುಣವೇದಿತ್ವಾತ್=ಕರುಣೆಯ ಕಾರಣದಿಂದ; ಅಧರ್ಮಃ=ಅಧರ್ಮ; ಅಯಮ್=ಇದು; ಇತಿ=ಎಂದು; ದ್ವಿಜಃ=ದ್ವಿಜ,ವಾಲ್ಮೀಕಿ; ನಿಶಾಮ್ಯ=ಗಮನಿಸಿ; ರುದತೀಂ=ಅಳುತ್ತಿರುವ; ಕ್ರೌಂಚೀಮ್=ಕ್ರೌಂಚ ಪಕ್ಷಿಯನ್ನು; ಇದಂ=ಈ; ವಚನಮ್=ಮಾತನ್ನು; ಅಬ್ರವೀತ್=ಹೇಳಿದನು
ಅನುವಾದ:ಆಗ ವಾಲ್ಮೀಕಿಯು ಅಳುತ್ತಿರುವ ಕ್ರೌಂಚ ಪಕ್ಷಿಯನ್ನು ನೋಡಿ ಇದು ಅನ್ಯಾಯ ಎಂದು ಈ ಮಾತುಗಳನ್ನು ಹೇಳಿದನು.ಶ್ರ
♦
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್||2.15||
ಇನ್ನಷ್ಟು ಓದಿ......
ಶಬ್ದಾರ್ಥ:ಮಾ=ಬೇಡ; ನಿಷಾದ=ಬೇಡ; ಪ್ರತಿಷ್ಠಾಂ=ಪ್ರತಿಷ್ಠೆಯನ್ನು,ಪ್ರಸಿದ್ಧಿಯನ್ನು;ತ್ವಂ=ನೀನು; ಅಗಮಃ=ಪಡೆಯುತ್ತೀಯ; ಶಾಶ್ವತೀಃ=ಶಾಶ್ವತವಾದ; ಸಮಾಃ=ಯುಗ-ಯುಗಗಳತನಕ; ಯತ್=ಯಾವುದು;ಕ್ರೌಂಚಮಿಥುನಾತ್ ಏಕಂ=ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು; ಅವಧೀಃ=ಕೊಂದಿರವೆ; ಕಾಮಮೋಹಿತಮ್=ಕಾಮಮೋಹಿತವಾದ(ಪಕ್ಷಿಯನ್ನು)
ಅನುವಾದ:ಬೇಡನೇ, ಕ್ರೌಂಚಪಕ್ಷಿಗಳ ಜೋಡಿ ಕಾಮಮೋಹಿತವಾಗಿರುವಾಗ ಅದರಲ್ಲಿ ಒಂದು ಪಕ್ಷಿಯನ್ನು ಕೊಂದಿರುವದಕ್ಕಾಗಿ ನೀನು ನೂರಾರು ವರ್ಷಗಳ ತನಕ ಗೌರವವನ್ನು ಪಡೆಯದಿರು. (ಹೀಗೆಂದು ವಾಲ್ಮೀಕಿ ಹೇಳಿದನು)
♦
ತಸ್ಯೈವ ಬ್ರುವತಶ್ಚಿಂತಾ ಬಭೂವ ಹೃದಿ ವೀಕ್ಷತಃ|
ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ||2.16||
ಇನ್ನಷ್ಟು ಓದಿ......
ಶಬ್ದಾರ್ಥ:ತಸ್ಯ=ಅವನ; ಏವಂ=ಹೀಗೆ; ಬ್ರುವತಃ=ಹೇಳಿದ; ಚಿಂತಾ=ಚಿಂತೆ; ಬಭೂವ=ಆದನು; ಹೃದಿ=ಹೃದಯದಲ್ಲಿ; ವೀಕ್ಷತಃ=ನೋಡಿದನು; ಶೋಕಾರ್ತೇನ=ಶೋಕದಿಂದ; ಅಸ್ಯ=ಇದರ; ಶಕುನೇಃ=ಪಕ್ಷಿಯ; ಕಿಮ್=ಏನು; ಇದಂ=ಇದು; ವ್ಯಾಹೃತಂ=ಹೇಳಲ್ಪಟ್ಟ; ಮಯಾ=ನನ್ನಿಂದ
ಅನುವಾದ: ಅವನು ಹೀಗೆ ಹೇಳಿದ ನಂತರ ತನ್ನನ್ನು ಗಮನಿಸಿಕೊಂಡು ಚಿಂತಿಸಿದನು "ಪಕ್ಷಿಯ ಶೋಕದಿಂದ ನನ್ನಿಂದ ಏನು ಹೇಳಲ್ಪಟ್ಟಿತು". 
♦
ಚಿಂತಯನ್ಸ ಮಹಾಪ್ರಾಜ್ಞಶ್ಚಕಾರ ಮತಿಮಾನ್ ಮತಿಮ್|
ಶಿಷ್ಯಂ ಚೈವಾಬ್ರವೀದ್ವಾಕ್ಯಮಿದಂ ಸ ಮುನಿಪುಂಗವಃ||2.17||
ಇನ್ನಷ್ಟು ಓದಿ......
ಶಬ್ದಾರ್ಥ: ಚಿಂತಯನ್=ಯೋಚಿಸಿ; ಸಃ=ಅವನು; ಮಹಾಪ್ರಾಜ್ಞಃ=ಮಹಾಜ್ಞಾನಿಯು; ಚಕಾರ ಮತಿಮ್=ಮನಸ್ಸು ಮಾಡಿದನು, ನಿರ್ಧರಿಸಿದನು; ಮತಿಮಾನ್=ಬುದ್ಧಿವಂತನು; ಶಿಷ್ಯಂ=ಶಿಷ್ಯನಿಗೆ; ಚ ಏವ=ಸಹ; ಅಬ್ರವೀತ್=ಹೇಳಿದನು; ವಾಕ್ಯಂ=ವಾಕ್ಯವನ್ನು; ಇದಂ=ಇದನ್ನು; ಸಃ=ಅವನು; ಮುನಿಪುಂಗವಃ=ಮುನಿಶ್ರೇಷ್ಠನು; 
ಅನುವಾದ: ಯೋಚಿಸಿದ ಆ ಮಹಾಜ್ಞಾನಿ, ಮುನಿಪುಂಗವನು ತಾನು ನಿರ್ಧರಿಸಿ ಶಿಷ್ಯನಿಗೆ ಈ ಮಾತನ್ನು ಹೇಳಿದನು. 
♦
ಪಾದಬದ್ಧೋऽಕ್ಷರಸಮಸ್ತಂತ್ರೀಲಯಸಮನ್ವಿತಃ |
ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ ||2.18||
ಇನ್ನಷ್ಟು ಓದಿ......
ಶಬ್ದಾರ್ಥ: ಪಾದಬದ್ಧಃ=ಪಾದಬದ್ಧವಾಗಿ, ಛಂದೋಬದ್ಧವಾಗಿ; ಅಕ್ಷರಸಮಃ = ಅಕ್ಷರಗಳಯ ಸರಿಯಾಗಿ; ತಂತ್ರಿಲಯಸಮನ್ವಿತಃ=ರಾಗ-ಲಯಗಳ ಸಮನ್ವಿತವಾದ; ಶೋಕಾರ್ತಸ್ಯ=ಶೋಕ ತುಂಬಿದವನ; ಪ್ರವೃತ್ತಃ=ಉದ್ಭವವಾದ; ಮೇ=ನನ್ನ; ಶ್ಲೋಕಃ=ಶ್ಲೋಕವು; ಭವತು=ಆಗಲಿ; ನ ಅನ್ಯಥಾ=ಬೇರೆ ರೀತಿ ಅಲ್ಲ 
ಅನುವಾದ: ಶೋಕದಲ್ಲಿರುವ ನನ್ನಿಂದ ಹುಟ್ಟಿದ ಇದು ಛಂದೋಬದ್ಧವಾಗಿ, ರಾಗ-ಲಯಬದ್ಧವಾಗಿ, ಶ್ಲೋಕವಾಗಲಿ, ಬೇರೆ ಅಲ್ಲ. - ಎಂದು ವಾಲ್ಮೀಕಿ ಹೇಳುತ್ತಾನೆ.
♦
ಶಿಷ್ಯಸ್ತು ತಸ್ಯ ಬ್ರುವತೋ  ಮುನೇರ್ವಾಕ್ಯಮನುತ್ತಮಮ್|
ಪ್ರತಿಜಗ್ರಾಹ ಸಂಹೃಷ್ಟಸ್ತಸ್ಯ ತುಷ್ಟೋऽಭವದ್ಗುರುಃ||2.19||
ಇನ್ನಷ್ಟು ಓದಿ......
ಶಬ್ದಾರ್ಥ: ಶಿಷ್ಯಃ=ಶಿಷ್ಯನು; ತು=ಆದರೆ; ತಸ್ಯ=ಅವನ; ಬ್ರುವತಃ=ಹೇಳುತ್ತಿರುವವನ;  ಮುನೇಃ=ಋಷಿಯ; ವಾಕ್ಯಮ್=ವಾಕ್ಯವನ್ನು;  ಅನುತ್ತಮಮ್=ಶ್ರೇಷ್ವವಾದದ್ದನ್ನು; ಪ್ರತಿಜಗ್ರಾಹ=ಸ್ವೀಕರಿಸಿದನು; ಸಂಹೃಷ್ಟಃ=ಸಂತೋಷವಾಗಿರುವ; ತುಷ್ಟಃ=ಸಂತೃಪ್ತನಾಗಿರವ; ಅಭವತ್=ಆದನು; ಗುರುಃ=ಗುರುವು;
ಅನುವಾದ: ಶಿಷ್ಯನು ಅವನು ಹೇಳಿದ ಶ್ರೇಷ್ಠ ವಾಕ್ಯವನ್ನು ಸಂತೋಷದಿಂದ ಸ್ವೀಕರಿಸಿದನು. ಅದರಿಂದ ಗುರುವು ಸಂತೃಪ್ತನಾದನು. 
♦
ಸೋऽಭಿಷೇಕಂ ತತಃ ಕೃತ್ವಾ ತೀರ್ಥೇ ತಸ್ಮಿನ್ಯಥಾವಿಧಿ |
ತಮೇವ ಚಿಂತಯನ್ನರ್ಥಮುಪಾವರ್ತತ ವೈ ಮುನಿಃ||2.20||
ಇನ್ನಷ್ಟು ಓದಿ......
ಶಬ್ದಾರ್ಥ: ಸಃ=ಅವನು; ಅಭಿಷೇಕಂ=ಅಭಿಷೇಕವನ್ನು; ತತಃ=ಆಗ; ಕೃತ್ವಾ=ಮಾಡಿ; ತೀರ್ಥೇ=ನೀರಿನಲ್ಲಿ, ನದಿಯಲ್ಲಿ; ತಸ್ಮಿನ್=ಅಲ್ಲಿ; ಯಥಾವಿಧಿ=ವಿಧಿಪೂರ್ವಕವಾಗಿ; ಚಿಂತಯನ್=ಯೋಚಿಸಿದನು; ಅರ್ಥಮ್=ಅರ್ಥವನ್ನು; ಉಪಾವರ್ತತ=ಹಿಂತಿರುಗಿದನು; ವೈ=ನಿಜಕ್ಕೂ; ಮುನಿಃ=ಮುನಿಯು;
ಅನುವಾದ: ಆ ನದಿಯಲ್ಲಿ ಸ್ನಾನ-ಅಭಿಷೇಕಗಳನ್ನು ಯಥಾವಿಧಿ ಮುಗಿಸಿದ ವಾಲ್ಮೀಕಿಯು ಯೋಚಿಸುತ್ತ ತನ್ನ ಆಶ್ರಮಕ್ಕೆ ಮರಳಿದನು. 
♦
ಭರದ್ವಾಜಸ್ತತಃ ಶಿಷ್ಯೋ ವಿನೀತಃ ಶ್ರುತವಾನ್ ಮುನಿಃ|
ಕಲಶಂ ಪೂರ್ಣಮಾದಾಯ ಪೃಷ್ಠತೋऽನುಜಗಾಮ ಹ ||2.21||
ಇನ್ನಷ್ಟು ಓದಿ......
ಶಬ್ದಾರ್ಥ: ಭಾರದ್ವಾಜಃ=ಭಾರದ್ವಾಜನು; ತತಃ=ಆಗ; ಶಿಷ್ಯಃ=ಶಿಷ್ಯನು; ವಿನೀತಃ=ವಿನಯವಂತನು;  ಶ್ರುತವಾನ್=ಶ್ರುತಿಗಳನ್ನು ಅರಿತ, ವೇದಗಳನ್ನು ಅರಿತ; ಮುನಿಃ=ಋಷಿಯು;  ಕಲಶಂ=ಕಲಶವನ್ನು; ಪೂರ್ಣಂ=ತುಂಬಿರುವದನ್ನು; ಆದಾಯ=ತಂದು; ಪೃಷ್ಠತಃ=ಹಿಂದೆ; ಅನುಜಗಾಮ=ಹಿಂಬಾಲಿಸಿದನು;
ಅನುವಾದ: ಆಗ ವಿನೀತನಾದ, ವೇದಗಳಲ್ಲಿ ವಿದ್ವಾಂಸನಾದ ಭಾರದ್ವಾಜ ಋಷಿಯು ತುಂಬಿರುವ ಕಲಶವನ್ನು ಹಿಡಿದುಕೊಂಡು ವಾಲ್ಮೀಕಿಯನ್ನು ಹಿಂಬಾಲಿಸಿದನು. 
 
♦
ಸ ಪ್ರವಿಶ್ಯಾಶ್ರಮಪದಂ ಶಿಷ್ಯೇಣ ಸಹ ಧರ್ಮವಿತ್|
ಉಪವಿಷ್ಟಃ ಕಥಾಶ್ಚಾನ್ಯಾಶ್ಚಕಾರ  ಧ್ಯಾನಮಾಸ್ಥಿತಃ ||2.22||
ಇನ್ನಷ್ಟು ಓದಿ......
ಶಬ್ದಾರ್ಥ: ಸಃ=ಅವನು; ಪ್ರವಿಶ್ಯ=ಪ್ರವೇಶಿಸಿ; ಆಶ್ರವಮಪದಂ=ಆಶ್ರಮವನ್ನು; ಶಿಷ್ಯೇಣ ಸಹ=ಶಿಷ್ಯನ ಜೊತೆ; ಧರ್ಮವಿತ್=ಧರ್ಮಜ್ಞನು; ಉಪವಿಷ್ಟಃ=ಕುಳಿತನು; ಕಥಾಃ=ಕಥೆಗಳನ್ನು; ಚ=ಹಾಗೂ; ಅನ್ಯಾಃ=ಬೇರೆ; ಚಕಾರ=ಮಾಡಿದನು, ಹೇಳಿದನು; ಧ್ಯಾನಮಾಸ್ಥಿತಃ=ಧ್ಯಾನಸ್ಥನಾಗಿ ;
ಅನುವಾದ:  ಧರ್ಮಜ್ಞನಾದ ವಾಲ್ಮೀಕಿಯು ಶಿಷ್ಯನ ಜೊತೆ ತನ್ನ ಆಶ್ರಮವನ್ನು ಪ್ರವೇಶಿಸಿ ಬೇರೆ ಬೇರೆ ವಿಷಯಗಳನ್ನು ಮಾತನಾಡಿದರೂ ಆ ಶ್ಲೋಕದ ಬಗ್ಗೆ ಧ್ಯಾನಿಸುತ್ತಿದ್ದ . 
♦
ಆಜಗಾಮ ತತೋ ಬ್ರಹ್ಮಾ ಲೋಕಕರ್ತಾ ಸ್ವಯಂ ಪ್ರಭುಃ|
ಚತುರ್ಮುಖೋ ಮಹಾತೇಜಾ ದ್ರಷ್ಟುಂ ತಂ ಮುನಿಪುಂಗವಂ ||2.23||
ಇನ್ನಷ್ಟು ಓದಿ......
ಶಬ್ದಾರ್ಥ: ಆಜಗಾಮ=ಬಂದನು; ತತಃ=ಆಗ; ಬ್ರಹ್ಮಾ=ಬ್ರಹ್ಮನು; ಲೋಕಕರ್ತಾ=ಲೋಕವನ್ನು ರಚಿಸಿದವನು; ಸ್ವಯಂ=ಸ್ವತಃ; ಪ್ರಭುಃ=ಪ್ರಭುವು; ಚತುರ್ಮುಖಃ=ನಾಲ್ಕು ಮುಖವುಳ್ಳವನು; ಮಹಾತೇಜಾ=ಮಹಾತೇಜಸ್ವಿ; ದ್ರಷ್ಟುಂ=ನೋಡಲು; ತಂ=ಅವನನ್ನು; ಮುನಿಪುಂಗವಂ=ಮುನಿಶ್ರೇಷ್ಠನನ್ನು ;
ಅನುವಾದ:   ಆಗ ಮಹಾತೇಜನಾದ ಚತುರ್ಮುಖಿಯಾದ ಲೋಕಕರ್ತನಾದ ಬ್ರಹ್ಮನು ಸ್ವಯಂ ವಾಲ್ಮೀಕಿಯನ್ನು ನೋಡಲೆಂದು ಬಂದನು . 
♦
ವಾಲ್ಮೀಕಿರಥ ತಂ ದೃಷ್ಟ್ವಾಸಹಸೋತ್ಥಾಯ ವಾಗ್ಯತಃ  |
 ಪ್ರಾಂಜಲಿಃ ಪ್ರಯತೋ ಭೂತ್ವಾ ತಸ್ಥೌ ಪರಮವಿಸ್ಮಿತಃ ||2.24||
ಇನ್ನಷ್ಟು ಓದಿ......
ಶಬ್ದಾರ್ಥ: ವಾಲ್ಮೀಕಿಃ=ವಾಲ್ಮೀಕಿಯ; ಅಥ=ಆಗ; ತಂ=ಅವನನ್ನು; ದೃಷ್ಟ್ವಾ=ನೋಡಿ; ಸಹಸಾ=ಹಠಾತ್ತಾಗಿ,ತಕ್ಷಣದಲ್ಲಿ; ಉತ್ಥಾಯ=ಎದ್ದು; ವಾಗ್ಯತಃ =ಮಾತನ್ನು ನಿಯಂತ್ರಿಸಿದವನಾಗಿ; ಪ್ರಾಂಜಲಿಃ=ಕೈ ಮುಗಿದು; ಪ್ರಯತಃ=ನಿಯಂತ್ರಿತ; ಭೂತ್ವಾ=ಆಗಿ; ತಸ್ಥೌ=ಎದ್ದು ನಿಂತನು; ಪರಮವಿಸ್ಮಿತಃ=ಪರಮಾಶ್ಚರ್ಯದಿಂದ;
ಅನುವಾದ: ಆಗ ಪರಮಾಶ್ಚರ್ಯ ಹೊಂದಿದ ವಾಲ್ಮೀಕಿಯ ತಕ್ಷಣ ಎದ್ದು ಬ್ರಹ್ಮನಿಗೆ ಕೈ ಮುಗಿದು ಮಂತ್ರಮುಗ್ಧನಾಗಿ ನಿಂತುಕೊಂಡನು    . 
♦
ಪೂಜಯಾಮಾಸ ತಂ ದೇವಂ ಪಾದ್ಯಾರ್ಘ್ಯಾಸನವಂದನೈಃ|
ಪ್ರಣಮ್ಯ ವಿಧಿವಚ್ಛೈನಂ ಪೃಷ್ಟ್ವಾऽನಾಮಯಮವ್ಯಯಮ್  ||2.25||
ಇನ್ನಷ್ಟು ಓದಿ......
ಶಬ್ದಾರ್ಥ:  ಪೂಜಯಮಾಸ=ಪೂಜಿಸಿದನು; ತಂ=ಅವನನ್ನು; ದೇವಂ=ದೇವನನ್ನು, ಬ್ರಹ್ಮನನ್ನು; ಪಾದ್ಯ=ಪಾದಗಳನ್ನು; ಅರ್ಘ್ಯ=ಕುಡಿಯಲು ಅರ್ಪಿಸುವ ನೀರು; ಆಸನ=ಕುಳಿತುಕೊಳ್ಳಲು ಆಸನ; ವಂದನೈಃ=ವಂದನೆಗಳಿಂದ; ಪ್ರಣಮ್ಯ=ನಮಸ್ಕರಿಸಿ; ವಿಧಿವತ್=ವಿಧಿವತ್ತಾಗಿ; ಚ=ಹಾಗೂ; ಏನಂ=ಇವನನ್ನು ; ಪೃಷ್ಟ್ವಾ=ಕೇಳಿ; ಅನಾಮಯಮ್=ಯೋಗಕ್ಷೇಮವನ್ನು; ಅವ್ಯಯಮ್=ಅವ್ಯಯನನ್ನು;
ಅನುವಾದ: ವಾಲ್ಮೀಕಿಯು ಬ್ರಹ್ಮನಿಗೆ ವಂದಿಸಿ ಯೋಗಕ್ಷೇಮ ವಿಚಾರಿಸಿ ಅವನು ಪಾದಗಳನ್ನು ತೊಳೆದು, ಅವನಿಗೆ ಕುಡಿಯಲು ನೀರು ಕೊಟ್ಟು, ಅವನಿಗೆ ಕುಳಿತುಕೊಳ್ಳಲು ಆಸನ ಕೊಟ್ಟು  ನಮಸ್ಕರಿಸಿದನು  . 
♦
ಅಥೋಪವಿಶ್ಯ ಭಗವಾನಾಸನೇ ಪರಮಾರ್ಚಿತೇ|
ವಾಲ್ಮೀಕಯೇ ಚ ಋಷಯೇ ಸಂದಿದೇಶಾಸನಂ ತತಃ  ||2.26||
ಇನ್ನಷ್ಟು ಓದಿ......
ಶಬ್ದಾರ್ಥ:  ಅಥ=ಆಗ; ಉಪವಿಶ್ಯ=ಕುಳಿತು; ಭಗವಾನ್=ಭಗವಂತನು; ಆಸನೇ=ಆಸನದಲ್ಲಿ; ಪರಮಾರ್ಚಿತೇ=ಬಹಳವಾಗಿ ಪೂಜಿಸಲ್ಪಟ್ಟ; ವಾಲ್ಮೀಕಯೇ=ವಾಲ್ಮೀಕಿಗೆ; ಚ=ಹಾಗೂ; ಋಷಯೇ=ಋಷಿಗೆ; ಸಂದಿದೇಶ=ತೋರಿಸಿದನು,ಸೂಚಿಸಿದನು; ಆಸನಂ=ಆಸನವನ್ನು; ತತಃ=ಆಗ;
ಅನುವಾದ: ಆಗ ವಾಲ್ಮೀಕಿಯಿಂದ ಪೂಜಿಸಲ್ಪಟ್ಟ ಬ್ರಹ್ಮನು  ಆಸನದಲ್ಲಿ ಕುಳಿತು ವಾಲ್ಮೀಕಿಗೂ ಕುಳಿತುಕೊಳ್ಳಲು ಸೂಚಿಸಿದನು. 
♦
ಬ್ರಹ್ಮಣಾ ಸಮನುಜ್ಞಾತಃ ಸೋಪ್ಯುಪಾವಿಶದಾಸನೇ|
ಉಪವಿಷ್ಟೇ ತದಾ ತಸ್ಮಿನ್ಸಾಕ್ಷಾಲ್ಲೋಕಪಿತಾಮಹೇ   ||2.27||
ತದ್ಗತೇನೈವ ಮನಸಾ ವಾಲ್ಮೀಕಿರ್ಧ್ಯಾನಮಾಸ್ಥಿತಃ|
ಇನ್ನಷ್ಟು ಓದಿ......
ಶಬ್ದಾರ್ಥ:  ಬ್ರಹ್ಮಣಾ=ಬ್ರಹ್ಮನಿಂದ; ಸಮನುಜ್ಞಾತಃ=ಅಪ್ಪಣೆ ಪಡೆದು; ಸಃ=ಅವನು; ಅಪಿ=ಕೂಡ; ಉಪವಿಶತ್=ಕುಳಿತನು; ಆಸನೇ=ಆಸನದಲ್ಲಿ;  ಉಪವಿಷ್ಟೇ=ಕುಳಿತು; ತದಾ=ಆಗ; ತಸ್ಮಿನ್=ಅದರಲ್ಲಿ; ಸರ್ವಲೋಕವಪಿತಾಮಹೇ=ಸರ್ವ ಲೋಕದ ಪಿತಾಮಹನ ಎದುರು; ತದ್ಗತೇನ=ಅದರಲ್ಲಿ; ಏವ=ಕೇವಲ; ಮನಸಾ=ಮನಸ್ಸಿನಲ್ಲಿ; ವಾಲ್ಮೀಕಿಃ=ವಾಲ್ಮೀಕಿಯು; ಧ್ಯಾನಂ=ಧ್ಯಾನ; ಆಸ್ಥಿತಃ=ಮುಳುಗಿದ್ದನು, ಮಗ್ನನಾಗಿದ್ದನು;
ಅನುವಾದ: ಬ್ರಹ್ಮನಿಂದ ಅಪ್ಪಣೆ ಪಡೆದು ವಾಲ್ಮೀಕಿಯೂ ಸಹ ಆಸನದಲ್ಲಿ ಕುಳಿದುಕೊಂಡನು. ಲೋಕದ ಪಿತಾಮಹನ ಎದುರು ಕುಳಿತಿದ್ದರೂ ವಾಲ್ಮೀಕಿಯು ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದನು (ಕ್ರೌಂಚಪಕ್ಷಿಯ ಬಗ್ಗೆ). 
♦
ಪಾಪತ್ಮನಾ ಕೃತಂ ಕಷ್ಟಂ ವೈರಗ್ರಹಣಬುದ್ಧಿನಾ||2.28||
ಯಸ್ತಾದೃಶಂ ಚಾರುರವಂ ಕ್ರೌಂಚಂ ಹನ್ಯಾದಕಾರಣಾತ್ |
ಇನ್ನಷ್ಟು ಓದಿ......
ಶಬ್ದಾರ್ಥ:  ಪಾಪತ್ಮನಾ=ಪಾಪಾತ್ಮನಿಂದ,ಪಾಪಿಯಿಂದ; ಕೃತಂ=ಮಾಡಿದ; ಕಷ್ಟಂ=ದುಷ್ಕೃತ್ಯ; ವೈರಗ್ರಹಣಬುದ್ಧಿನಾ=ವೈರಿಯನ್ನು ಹಿಡಿಯುವ ಉದ್ದೇಶದಿಂದ; ಯಃ=ಯಾರು; ತಾದೃಶಂ=ಆ ರೀತಿ; ಚಾರುರವಂ=ಇಂಪಾದ ಕಂಠದ; ಕ್ರೌಂಚಂ=ಕ್ರೌಂಚವನ್ನು; ಹನ್ಯಾತ್=ಕೊಂದ; ಅಕಾರಣಾತ್=ನಿಷ್ಕಾರಣವಾಗಿ
ಅನುವಾದ:ಪಾಪಿಯಾದ ಬೇಡನು ಹಕ್ಕಿಯನ್ನು ಹಿಡಿಯುವ ಉದ್ದೇಶದಿಂದ ಸುಂದರವಾಗಿ ಹಾಡುವ ಕ್ರೌಂಚಪಕ್ಷಿಯನ್ನು ನಿಷ್ಕಾರಣವಾಗಿ ಕೊಂದು ಅತೀ ಕಷ್ಟವನ್ನು ಉಂಟುಮಾಡಿದನು. 
♦
ಶೋಚನ್ನೇವ ಮುಹುಃ ಕ್ರೌಂಚೀಮುಪ ಶ್ಲೋಕಮಿಮಂ ಪುನಃ||2.29||
ಪುನರಂತರ್ಗತಮನಾ ಭೂತ್ವಾ ಶೋಕಪರಾಯಣಃ   |
ಇನ್ನಷ್ಟು ಓದಿ......
ಶಬ್ದಾರ್ಥ:  ಶೋಚನ್=ದುಃಖಿಸುತ್ತ; ಏವ=ಕೇವಲ; ಮುಹುಃ=ಪುನಃ ಪುನಃ; ಕ್ರೌಂಚೀಂ=ಹೆಣ್ಣು ಕ್ರೌಂಚಪಕ್ಷಿಯ; ಉಪಶ್ಲೋಕಂ=ಶ್ಲೋಕವನ್ನು; ಪುನಃ ಪುನಃ=ಮತ್ತೆ ಮತ್ತೆ ; ಅಂತರ್ಗಮನಾ=ಅಂತರ್ಮುಖಿ; ಭೂತ್ವಾ=ಆಗಿ; ಶೋಕಪರಾಯಣಃ=ಶೋಕತಪ್ತ;
ಅನುವಾದ:  ಶೋಕಾರ್ತನಾದ ವಾಲ್ಮೀಕಿಯು, ಆತ್ಮಾವಲೋಕನದಲ್ಲಿ ತೊಡಗಿ, ಹೆಣ್ಣು ಕ್ರೌಂಚ ಪಕ್ಷಿಯ ದುಸ್ಥಿತಿಯನ್ನು ಪದೇ ಪದೇ ನೆನೆದು ವ್ಯಥೆಪಡುತ್ತಾ ಈ ಶ್ಲೋಕವನ್ನು ಪಠಿಸಿದನು. 
♦
ತಮುವಾಚ ತತೋ ಬ್ರಹ್ಮಾ ಪ್ರಹಸ್ಯ ಮುನಿಪುಂಗವಮ್||2.30||
ಶ್ಲೋಕ ಏವ ತ್ವಯಾ ಬದ್ಧೋ ನಾತ್ರ ಕಾರ್ಯ ವಿಚಾರಣಾ  |
ಇನ್ನಷ್ಟು ಓದಿ......
ಶಬ್ದಾರ್ಥ:ತಂ=ಅವನನ್ನು; ಉವಾಚ=ಹೇಳಿದನು; ತತಃ=ಆಗ; ಬ್ರಹ್ಮ=ಬ್ರಹ್ಮನು; ಪ್ರಹಸ್ಯ=ಮುಗಳ್ನಗುತ್ತ; ಮುನಿಪುಂಗವಮ್=ಮುನಿಪುಂಗವನನ್ನು; ಶ್ಲೋಕ ಏವ=ಶ್ಲೋಕವೇ; ತ್ವಯಾ=ನಿನ್ನಿಂದ; ಬದ್ಧಃ=ರಚಿತವಾದ; ನ ಅತ್ರ=ಅದರಲ್ಲಿ; ಕಾರ್ಯ ವಿಚಾರಣಾ=ಕಾರ್ಯದ ಸಂದೇಹ   ;
ಅನುವಾದ: ಬ್ರಹ್ಮನು ಮುಗುಳ್ನಗುತ್ತ ಮುನಿಪುಂಗವನಾದ ವಾಲ್ಮೀಕಿಗೆ ಹೀಗೆಂದು ಹೇಳಿದನು - "ನೀನು ರಚಿಸಿರುವದು ನಿಜವಾದ ಶ್ಲೋಕವೇ. ಅದರಲ್ಲಿ ಯಾವ ಸಂದೇಹವಿಲ್ಲ." 
♦
  . 
♦
ಮಚ್ಛಾಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ||2.31||
ರಾಮಸ್ಯ ಚರಿತಂ ಕೃತ್ಸ್ನಂ ಕುರು ತ್ವಮೃಷಿಸತ್ತಮ|
ಇನ್ನಷ್ಟು ಓದಿ......
ಶಬ್ದಾರ್ಥ: ಮತ್=ನನ್ನ; ಛಂದಾತ್ ಏವ=ಇಷ್ಟದಿಂದಲೇ; ತೇ=ನಿನಗೆ; ಪ್ರವೃತ್ತಿ=ಆರಂಭವಾಯಿತು; ಅಯಂ=ಇದು; ಸರಸ್ವತೀ=ವಾಕ್ ಝರಿ; ರಾಮಸ್ಯ=ರಾಮನ; ಚರಿತಂ=ಚರಿತ್ರೆಯನ್ನು; ಕೃತ್ಸ್ನಂ=ಸಂಪೂರ್ಣವಾಗಿ; ಕುರು=ಮಾಡು; ತ್ವಮ್=ನೀನು; ಋಷಿಸತ್ತಮಾ=ಋಷಿಶ್ರೇಷ್ಠನೇ
ಅನುವಾದ:"ಎಲೈ ಬ್ರಹ್ಮನ್, ನನ್ನ ಸಂಕಲ್ಪದಿಂದಲೇ ನಿನ್ನಿಂದ ಈ ವಾಕ್ಯವು ಹೊರಹೊಮ್ಮಿದೆ. ಶ್ರೇಷ್ಠ ತಪಸ್ವಿಯೇ, ರಾಮನ ಸಂಪೂರ್ಣ ಇತಿಹಾಸವನ್ನು (ಈ ಛಂದಸ್ಸಿನಲ್ಲಿಯೇ) ರಚಿಸು."
♦
ಧರ್ಮಾತ್ಮನೋ ಗುಣವತೋ ಲೋಕೇ ರಾಮಸ್ಯ ಧೀಮತಃ||2.32||
ವೃತ್ತಂ ಕಥಯ ವೀರಸ್ಯ ಯಥಾ ತೇ ನಾರದಾಚ್ಛ್ರುತಮ್|
ಇನ್ನಷ್ಟು ಓದಿ......
ಶಬ್ದಾರ್ಥ: ಧರ್ಮಾತ್ಮನಃ=ಧರ್ಮಾತ್ಮನು; ಗುಣವತಃ=ಗುಣವಂತನು; ಲೋಕೇ=ಲೋಕದಲ್ಲಿ; ರಾಮಸ್ಯ=ರಾಮನ; ಧೀಮತಃ=ಬುದ್ಧಿವಂತ;ವೃತ್ತಂ=ಕತೆಯನ್ನು; ಕಥಯ=ಹೇಳು; ವೀರಸ್ಯ=ವೀರನ; ಯಥಾ=ಹೇಗೆ; ತೇ=ನಿನ್ನ; ನಾರದಾತ್=ನಾರದನಿಂದ;ಶ್ರುತಮ್=ಕೇಳಿದ
ಅನುವಾದ:ನಾರದನಿಂದ ಕೇಳಿದ ಧರ್ಮಾತ್ಮನಾದ, ಗುಣವಂತನಾದ, ಧೀಮಂತನಾದ ರಾಮನ ಕತೆಯನ್ನು ಲೋಕಕ್ಕೆ ಹೇಳು.(ಹೀಗೆಂದು ಬ್ರಹ್ಮನು ವಾಲ್ಮೀಕಿಗೆ ಹೇಳಿದನು)
♦
ರಹಸ್ಯಂ ಚ ಪ್ರಕಾಶಂ ಚ ಯದ್ವೃತ್ತಂ ತಸ್ಯ ಧೀಮತಃ||2.33||
ರಾಮಸ್ಯ ಸಹ ಸೌಮಿತ್ರೇ ರಾಕ್ಷಸಾನಾಂ ಚ ಸರ್ವಶಃ|
ವೈದೇಹ್ಯಾಶ್ಚೈವ ಯದ್ವೃತ್ತಂ ಪ್ರಕಾಶಂ ಯದಿ ವಾ ರಹಃ||2.34||
ತಚ್ಚಾಪ್ಯವಿದಿತಂ ಸರ್ವಂ ವಿದಿತಃ ತೇ ಭವಿಷ್ಯತಿ|
ಇನ್ನಷ್ಟು ಓದಿ......
ಶಬ್ದಾರ್ಥ: ರಹಸ್ಯಂ=ರಹಸ್ಯವಾದದ್ದನ್ನು; ಚ=ಹಾಗೂ; ಪ್ರಕಾಶಂ=ರಹಸ್ಯವಲ್ಲದ್ದನ್ನು; ಚ=ಹಾಗೂ; ಯತ್=ಯಾವುದು; ವೃತ್ತಂ=ನಡೆದಿರುವದನ್ನು, ವೃತ್ತಾಂತವನ್ನು; ತಸ್ಯ=ಅವನ; ಧೀಮತಃ=ಜ್ಞಾನಿಯ, ವಿದ್ವಾಂಸನ; ರಾಮಸ್ಯ=ರಾಮನ; ಸಹ=ಜೊತೆಗೆ; ಸೌಮಿತ್ರೇ=ಲಕ್ಷ್ಮಣನ; ರಾಕ್ಷಸಾನಾಂ=ರಾಕ್ಷಸರ; ಚ=ಹಾಗೂ; ಸರ್ವಶಃ=ಎಲ್ಲ ರೀತಿಯಲ್ಲಿ; ವೈದೇಹ್ಯಾಃ=ಸೀತೆಯ; ಚ ಏವ=ಕೂಡ; ಯತ್=ಯಾವುದು; ವೃತ್ತಂ=ನಡೆದಿರುವದು; ಪ್ರಕಾಶಂ=ಬಹಿರಂಗವಾದದ್ದು; ಯದಿ ವಾ=ಅಥವಾ; ರಹಃ=ರಹಸ್ಯವಾಗಿದ್ದು; ತತ್ ಚ ಅಪಿ=ಅದೂ ಸಹ; ಅವಿದಿತಂ=ತಿಳಿಯದೇ ಇರುವದು; ಸರ್ವಂ=ಎಲ್ಲವೂ; ವಿದಿತಂ=ತಿಳಿದದ್ದು; ತೇ=ಅವು; ಭವಿಷ್ಯತಿ=ಆಗುತ್ತದೆ
ಅನುವಾದ:ರಾಮನ, ಲಕ್ಷ್ಮಣನ, ಭರತ ಹಾಗೂ ಸೀತೆಯ ಹಾಗೂ ರಾಕ್ಷಸರ ಎಲ್ಲ ರಹಸ್ಯವಾದ ಹಾಗೂ ಬಹಿರಂಗವಾದ ವೃತ್ತಾಂತಗಳು, ನಿನಗೆ ತಿಳಿದದ್ದು ಹಾಗೂ ನಿನಗೆ ತಿಳಿಯದೇ ಇದ್ದದ್ದು ಎಲ್ಲವೂ ನಿನಗೆ ತಿಳಿಯುತ್ತವೆ.
♦
ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ||2.35||
ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್|
ಇನ್ನಷ್ಟು ಓದಿ......
ಶಬ್ದಾರ್ಥ: ನ=ಅಲ್ಲ; ತೇ=ನಿನ್ನ; ವಾಕ್=ಮಾತು; ಅನೃತಾ=ಸುಳ್ಳು; ಕಾವ್ಯೇ=ಕಾವ್ಯದಲ್ಲಿ; ಕಾಚಿತ್=ಯಾವುದಾದರೂ; ಅತ್ರ=ಇಲ್ಲಿ; ಭವಿಷ್ಯತಿ=ಆಗುತ್ತದೆ; ಕುರು=ಮಾಡು; ರಾಮಕಥಾಂ=ರಾಮನ ಕತೆಯನ್ನು; ಪುಣ್ಯಾಂ=ಪುಣ್ಯಪ್ರದವಾದದ್ದನ್ನು; ಶ್ಲೋಕಬದ್ಧಾಂ=ಶ್ಲೋಕಗಳಾಗಿ ಹೊಂದಿಸಿದ; ಮನೋರಮಾಂ=ಮನೋರಂಜಕಾವಾಗಿ
ಅನುವಾದ: ಈ ಕಾವ್ಯದಲ್ಲಿ ನಿನ್ನ ಯಾವ ಮಾತೂ ಸಹ ಸುಳ್ಳಾಗುವದಿಲ್ಲ. ಪುಣ್ಯಪ್ರದವಾದ ರಾಮನ ಕತೆಯನ್ನು - ಮನೋಹರವಾದ ಹಾಗೂ ಶ್ಲೋಕಗಳಿಂದ ಜೋಡಿಸಿದ ಕತೆಯನ್ನು ರಚಿಸು.
♦
ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ||2.36||
ತಾವದ್ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ|
ಇನ್ನಷ್ಟು ಓದಿ......
ಶಬ್ದಾರ್ಥ: ಯಾವತ್=ಎಲ್ಲಿಯ ತನಕ; ಸ್ಥಾಸ್ಯಂತಿ=ಇರುತ್ತವೆಯೋ; ಗಿರಯಃ=ಪರ್ವತಗಳು; ಸರಿತಃ=ನದಿಗಳು; ಚ=ಹಾಗೂ; ಮಹೀತಲೇ=ಭೂಮಿಯ ಮೇಲೆ; ತಾವತ್=ಅಲ್ಲಿಯ ತನಕ; ರಾಮಾಯಣ ಕಥಾ=ರಾಮಾಯಣದ ಕತೆ; ಲೋಕೇಷು=ಲೋಕದಲ್ಲಿ; ಪ್ರಚರಿಷ್ಯತಿ=ಪ್ರಚಾರವಾಗಿರುತ್ತದೆ
ಅನುವಾದ: ಎಲ್ಲಿಯ ತನಕ ಈ ಭೂಮಿಯ ಮೇಲೆ ಗಿರಿ-ಪರ್ವತಗಳು ನಿಂತಿರುತ್ತವೆಯೋ, ನದಿಗಳು ಹರಿಯುತ್ತಿರುತ್ತವೆಯೋ, ಅಲ್ಲಿಯ ತನಕ ರಾಮಯಣದ ಕತೆ ಭೂಮಿಯ ಮೇಲೆ ಉಳಿದಿರುತ್ತದೆ.
♦
ಯಾವದ್ರಾಮಾಯಣ ಕಥಾ ತ್ವತ್ಕೃತಾ ಪ್ರಚರಿಷ್ಯತಿ||2.37||
ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯಸಿ|
ಇನ್ನಷ್ಟು ಓದಿ......
ಶಬ್ದಾರ್ಥ: ಯಾವತ್=ಎಲ್ಲಿಯ ತನಕ; ರಾಮಾಯಣ ಕಥಾ=ರಾಮಾಯಣದ ಕತೆಯು; ತ್ವತ್=ನಿನ್ನಿಂದ; ಕೃತಾ=ರಚಿಸಲ್ಪಟ್ಟದ್ದು; ಪ್ರಚರಿಷ್ಯತಿ=ಪ್ರಚಲಿತವಾಗಿರುವದೋ; ತಾವತ್=ಅಲ್ಲಿಯ ತನಕ; ಊರ್ಧ್ವಂ=ಮೇಲಿನ; ಅಧಮಃ=ಕೆಳಗಿನ; ಚ=ಹಾಗೂ; ತ್ವಂ=ನೀನು; ಮತ್=ನನ್ನ; ಲೋಕೇಷು=ಲೋಕದಲ್ಲಿ; ನಿವಸ್ಯತಿ=ಇರುತ್ತೀಯ
ಅನುವಾದ: ಎಲ್ಲಿಯ ತನಕ ರಾಮಾಯಣದ ಕತೆ ಪ್ರಚಲಿತದಲ್ಲಿರುವದೋ ಅಲ್ಲಿಯ ತನಕ ನೀನು ಮೇಲಿನ, ಕೆಳಗಿನ ಹಾಗೂ ನನ್ನ ಲೋಕದಲ್ಲಿ ಸಹ ಇರುತ್ತೀಯ. (ನಿನ್ನ ಹೆಸರು ಪ್ರಚಲಿತವಾಗಿರುತ್ತದೆ).
♦
ಇತ್ಯುಕ್ತ್ವಾ ಭಗವಾನ್ ಬ್ರಹ್ಮಾ ತತ್ರೈವಾಂತರಧೀಯತ||2.38||
ತತಃ ಸಶಿಷ್ಯೋ ಭಗವಾನ್ ಮುನಿರ್ವಿಸ್ಮಯಮಾಯಯೌ|
ಇನ್ನಷ್ಟು ಓದಿ......
ಶಬ್ದಾರ್ಥ: ಇತಿ=ಹೀಗೆ; ಉಕ್ತ್ವಾ=ಹೇಳಿ; ಭಗವಾನ್=ಭಗವಂತ; ಬ್ರಹ್ಮಾ=ಬ್ರಹ್ಮನು; ತತ್ರ ಏವ=ಅಲ್ಲೇ ಅಂತರಧೀಯತ=ಅಂತರ್ಧಾನನಾದನು; ತತಃ=ಆಗ; ಸಶಿಷ್ಯಃ=ಶಿಷ್ಯರ ಜೊತೆ; ಭಗವಾನ್ ಮುನಿಃ=ಭಗವಾನ್ ಋಷಿಯು(ವಾಲ್ಮೀಕಿಯು); ವಿಸ್ಮಯಂ=ಆಶ್ಚರ್ಯವನ್ನು; ಆಯಯೌ=ಹೊಂದಿದನು
ಅನುವಾದ:ಹೀಗೆ ಹೇಳಿ ಭಗವಾನ್ ಬ್ರಹ್ಮನು ಅಲ್ಲಿಯೇ ಅಂತರ್ಧಾನನಾದನು. ಆಗ (ಅದನ್ನು ನೋಡುತ್ತಿದ್ದ) ವಾಲ್ಮೀಕಿ ಋಷಿಯು ಹಾಗೂ ಅವನ ಶಿಷ್ಯರು ಆಶ್ಚರ್ಯಚಕಿತರಾದರು.
♦
ತಸ್ಯ ಶಿಷ್ಯಾಸ್ತತಃ ಸರ್ವೇ ಜಗುಃ ಶ್ಲೋಕಮಿಮಂ ಪುನಃ||2.39||
ಮುಹುರ್ಮುಹುಃ ಪ್ರೀಯಮಾಣಾ ಪ್ರಾಹುಶ್ಚ ಭೃಶವಿಸ್ಮಿತಾಃ|
ಇನ್ನಷ್ಟು ಓದಿ......
ಶಬ್ದಾರ್ಥ: ತಸ್ಯ=ಅವನ; ಶಿಷ್ಯಾಃ=ಶಿಷ್ಯರು; ತತಃ=ಆಗ; ಸರ್ವೇ=ಎಲ್ಲರೂ; ಜಗುಃ=ಹಾಡಿದರು; ಶ್ಲೋಕಂ=ಶ್ಲೋಕವನ್ನು; ಇಮಂ=ಇದನ್ನು; ಪುನಃ=ಪುನಃ; ಮುಹುಃ ಮುಹುಃ=ಪದೇ ಪದೇ; ಪ್ರೀಯಮಾಣಾ=ಪ್ರೀತಿಯಿಂದ; ಪ್ರಾಹುಃ=ಹೇಳಿದರು; ಚ=ಹಾಗೂ; ಭೃಶವಿಸ್ಮಿತಾಃ=ಅತಿ ವಿಸ್ಮಯದಿಂದ
ಅನುವಾದ: ನಂತರ ಅವನ ಶಿಷ್ಯರು ಆ ಶ್ಲೋಕವನ್ನು ಹಾಡಿದರು. ಪದೇ ಪದೇ ಸಂತೋಷದಿಂದ ಹಾಗೂ ವಿಸ್ಮಯದಿಂದ ಅವರು ಅದನ್ನು ಹೇಳುತ್ತಲೇ ಇದ್ದರು.
♦
ಸಮಾಕ್ಷರೈಶ್ಚತುರ್ಭಿರ್ಯಃ ಪಾದೈರ್ಗೀತೋ ಮಹರ್ಷಿಣಾ||2.40||
ಸೋನುವ್ಯಾಹರಣಾದ್ಭೂಯಃ ಶೋಕಃ ಶ್ಲೋಕತ್ವಮಾಗತಃ|
ಇನ್ನಷ್ಟು ಓದಿ......
ಶಬ್ದಾರ್ಥ: ಸಮಾಕ್ಷರೈಃ=ಸಮ ಅಕ್ಷರಗಳಿಂದ; ಚತುರ್ಭಿಃ=ನಾಲ್ಕು; ಯಃ=ಯಾವುದು; ಪಾದೈಃ=ಪಾದಗಳಿಂದ; ಗೀತಃ=ಹಾಡಿದ್ದು; ಮಹರ್ಷಿಣಾ=ಮಹರ್ಷಿಯಿಂದ; ಸಃ=ಅದು; ಅನುವ್ಯಾಹರಣಾತ್=ಪುನರಾವರ್ತಿಸಿದ್ದರಿಂದ; ಭೂಯಃ=ಮತ್ತೆ; ಶೋಕಃ=ಶೋಕವು; ಶ್ಲೋಕತ್ವಂ ಆಗತಃ=ಶ್ಲೋಕತ್ವವನ್ನು ಪಡೆಯಿತು
ಅನುವಾದ: ಸಮಾನ ಅಕ್ಷರಗಳಿಂದ ಕೂಡಿದ, ಚತುರ್ಪಾದದ ಆ ಶ್ಲೋಕವನ್ನು ಮಹಾನ್ ಋಷಿ ವಾಲ್ಮೀಕಿಯು ಉಚ್ಚರಿಸಿದಾಗ, ಮತ್ತು ಎಲ್ಲರೂ ಪುನಃ ಪುನಃ ಪಠಿಸಿದಾಗ, ಅದು ಶ್ಲೋಕವಾಗಿ ಪ್ರಾಮುಖ್ಯತೆಯನ್ನು ಪಡೆಯಿತು. (ವಾಲ್ಮೀಕಿಯ ಶೋಕವು ಶ್ಲೋಕವಾಗಿ ಮಾರ್ಪಾಡಾಯಿತು).
♦
ತಸ್ಯ ಬುದ್ಧಿರಿಯಂ ಜಾತಾ ವಾಲ್ಮೀಕೇರ್ಭವಿತಾತ್ಮನಃ|
ಕೃತ್ಸ್ನಂ ರಾಮಾಯಣಂ ಕಾವ್ಯಮೀದೃಶೈಃ ಕರವಾಣ್ಯಹಮ್||2.41||
ಇನ್ನಷ್ಟು ಓದಿ......
ಶಬ್ದಾರ್ಥ: ತಸ್ಯ=ಅವನ; ಬುದ್ಧಿಃ=ಬುದ್ಧಿಯು; ಇಯಂ=ಇದು; ಜಾತಾ=ಹುಟ್ಟಿತು; ವಾಲ್ಮೀಕೇಃ=ವಾಲ್ಮೀಕಿಯ; ಭವಿತಾತ್ಮನಃ=ಮನೋನಿಗ್ರಹವಿರುವವನ; ಕೃತ್ಸ್ನಂ=ಸಂಪೂರ್ಣ; ರಾಮಾಯಣಂ=ರಾಮಾಯಣವನ್ನು; ಕಾವ್ಯಂ=ಕಾವ್ಯವನ್ನು; ಈದೃಶಃ=ಹೀಗೆ; ಕರವಾಣಿ=ನಾನು ರಚಿಸಲಿ; ಅಹಂ=ನಾನು;
ಅನುವಾದ:ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವಿದ್ದ ವಾಲ್ಮೀಕಿಗೆ ಒಂದು ಯೋಚನೆ ಹೊಳೆಯಿತು: "ನಾನು ರಾಮಾಯಣ ಎಂಬ ಮಹಾಕಾವ್ಯವನ್ನು ಸಂಪೂರ್ಣವಾಗಿ ಇದೇ ಛಂದಸ್ಸಿನಲ್ಲಿ ರಚಿಸುತ್ತೇನೆ."
♦
ಉದಾರವೃತ್ತಾರ್ಥಪದೈರ್ಮನೋರಮೈ-
-ಸ್ತತಃ ಸ ರಾಮಸ್ಯ ಚಕಾರ ಕೀರ್ತಿಮಾನ|
ಸಮಾಕ್ಷರೈಃ ಶ್ಲೋಕಶತೈರ್ಯಶಸ್ವಿನೋ
ಯಶಸ್ಕರಂ ಕಾವ್ಯಮುದಾರಧೀರ್ಮುನಿಃ||2.42||
ಇನ್ನಷ್ಟು ಓದಿ......
ಶಬ್ದಾರ್ಥ: ಉದಾರವೃತ್ತಾರ್ಥಪದೈಃ=ಶ್ರೇಷ್ಠ ಛಂದ ಹಾಗೂ ಅರ್ಥ ಹೊಂದಿದ ಪದಗಳಿಂದ; ಮನೋರಮೈಃ=ಮನೋರಮವಾದದ್ದರಿಂದ; ತದಾ=ಆಗ; ಅಸ್ಯ=ಅವನ; ರಾಮಸ್ಯ=ರಾಮನ; ಚಕಾರ=ಮಾಡಿದನು; ಕೀರ್ತಿಮಾನ್=ಕೀರ್ತಿವಂತನು; ಸಮಕ್ಷರೈಃ=ಸಮ ಅಕ್ಷರಗಳಿಂದ ಕೂಡಿದ; ಶ್ಲೋಕಶತೈಃ=ನೂರಾರು ಶ್ಲೋಕಗಳಿಂದ ಕೂಡಿದ; ಯಶಸ್ವಿನಃ=ಯಶಸ್ವಿಯ; ಯಶಸ್ಕರಂ=ಯಶಸ್ಕರವಾದ; ಕಾವ್ಯಂ=ಕಾವ್ಯವನ್ನು; ಉದಾರಧೀಃ=ಉದಾರ ಮನಸ್ಸಿನ; ಮುನಿಃ=ಋಷಿಯು
ಅನುವಾದ:ಆ ಪ್ರಖ್ಯಾತ ಋಷಿ ಹಾಗೂ ಉದಾರ ಮನಸ್ಸಿನ ದ್ರಷ್ಟಾರನಾದ ವಾಲ್ಮೀಕಿ, ಶ್ರೀರಾಮನ ಕೀರ್ತಿಯನ್ನು ಕೊಂಡಾಡುವ, ಅರ್ಥಪೂರ್ಣವಾದ ಪದಗಳು, ಸುಂದರವಾದ ಛಂದೋಬದ್ಧ ರಚನೆ ಮತ್ತು ಲಯಬದ್ಧವಾದ ನೂರಾರು ಶ್ಲೋಕಗಳನ್ನು ಹೊಂದಿರಯವ ಅತ್ಯಂತ ಪ್ರಸಿದ್ಧವಾದ ರಾಮಾಯಣವನ್ನು ರಚಿಸಿದನು.
♦
ತದುಪಗತಸಮಾಸಸಂಧಿಯೋಗಂ
ಸಮಮಧುರೋಪನತಾರ್ಥವಾಕ್ಯಬದ್ಧಮ್|
ರಘುವರಚರಿತಂ ಮುನಿಪ್ರಣೀತಂ
ದಶಶಿರಸಶ್ಚ ವಧಂ ನಿಶಾಮಯಧ್ವಮ್||2.43||
ಇನ್ನಷ್ಟು ಓದಿ......
ಶಬ್ದಾರ್ಥ:ತತ್ ಉಪಗತ ಸಮಾಸ ಸಂಧಿ ಯೋಗಂ=ಸೂಕ್ತ ಸಮಾಸ ಸಂಧಿ ಹೊಂದಿದ; ಸಮ ಮಧುರ ಉಪನತ ಅರ್ಥ ವಾಕ್ಯ ಬದ್ಧಂ= ಸಮ, ಮಧುರ, ಅರ್ಥಗರ್ಭಿತ ವಾಕ್ಯಗಳನ್ನು ಹೊಂದಿದ; ರಘುವರಚರಿತಂ=ರಘುವಿನ (ರಾಮನ) ಚರಿತ್ರೆಯನ್ನು; ಮುನಿ=ಋಷಿ; ಪ್ರಣೀತಂ=ರಚಿಸಲ್ಪಟ್ಟ; ದಶಶಿರಸಃ=ದಶತಲೆಯವನ, ರಾವಣನ; ಚ=ಹಾಗೂ; ವಧಂ=ವಧೆಯನ್ನು; ನಿಶಾಮಯಧ್ವಮ್=ಕೇಳು;
ಅನುವಾದ:ಋಷಿ ವಾಲ್ಮೀಕಿ ರಚಿಸಿದ ರಾಮನ ಮತ್ತು ರಾವಣನ ವಧೆಗೆ ಸಂಬಂಧಿಸಿದ ಈ ಕಥೆಯು, ಸಂಯುಕ್ತ ಪದಗಳು, ಮಧುರವಾದ ಸಂಧಿಗಳು ಹಾಗೂ ಸರಳ, ಸುಶ್ರಾವ್ಯ ಮತ್ತು ಅರ್ಥಪೂರ್ಣ ನುಡಿಗಟ್ಟುಗಳಿಂದ ಕೂಡಿದೆ. ಇದನ್ನು ಆಲಿಸಿರಿ.

ಇತೀ ವಾಲ್ಮೀಕಿ ರಾಮಾಯಣ ಬಾಲಕಾಂಡೇ ದ್ವಿತೀಯ ಸರ್ಗಃ

Comments

Popular posts from this blog

ಬಾಲಕಾಂಡ - ಸರ್ಗ ೧

ಬಾಲಕಾಂಡ - ಸರ್ಗ ೩